Skip to main content

Posts

ಅಕ್ಕನ ವಚನಗಳು - 51 ರಿಂದ 60 ರವರೆಗೆ

೫೧. ಅಂಗ ಲಿಂಗವ ವೇಧಿಸಿ ಅಂಗ ಲಿಂಗದೊಳಗಾಯಿತ್ತು ಮನ ಲಿಂಗವ ವೇಧಿಸಿ ಮನ ಲಿಂಗದೊಳಗಾಯಿತ್ತು ಭಾವ ಲಿಂಗವ ವೇಧಿಸಿ ಭಾವ ಲಿಂಗದೊಳಗಾಯಿತ್ತು ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಂಲಿಂಗಿಯಾದೆನು ೫೨. ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯ ನಿನ್ನರಿಯದ ಮುಕ್ತಿಯೇ ನರಕ ಕಂಡಯ್ಯ ನೀನೊಲ್ಲದ ಸುಖವೇ ದುಃಖ ಕಂಡಯ್ಯ ನೀನೊಲಿದ ದುಃಖವೇ ಪರಮಸುಖ ಕಂಡಯ್ಯ ಚೆನ್ನಮಲ್ಲಿಕಾರ್ಜುನಯ್ಯ ನೀ ಕಟ್ಟಿ ಕೆಡಹಿದ ಬಂಧನವೇ ನಿರ್ಬಂಧನವೆಂದಿಪ್ಪೆನು ೫೩. ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ? ಸೂರ್ಯಕಾಂತದಗ್ನಿಯನಾರು ಭೇದಿಸಬಲ್ಲರು? ಅಪಾರಮಹಿಮ ಚೆನ್ನಮಲ್ಲಿಕಾರ್ಜುನನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ತೆರೆದೆನು ೫೪. ಘನವ ಕಂಡೆ, ಅನುವ ಕಂಡೆ ಆಯತ-ಸ್ವಾಯತ-ಸನ್ನಿಹಿತ ಸುಖವ ಕಂಡೆ ಅರಿವನರಿದು ಮರಹ ಮರೆದೆ ಕುರುಹಿನ ಮೋಹದ ಮರವೆಯನೀಡಾಡಿದೆ ಚೆನ್ನಮಲ್ಲಿಕಾರ್ಜುನ, ನಿಮ್ಮನರಿದು ಸೀಮೆಗೆಟ್ಟೆನು ೫೫. ಕ್ರೀಗಳು ಮುಟ್ಟಲರಿಯವು ನಿಮ್ಮನೆಂತು ಪೂಜಿಸುವೆ? ನಾದ-ಬಿಂದುಗಳು ಮುಟ್ಟಲರಿಯವು ನಿಮ್ಮನೆಂತು ಹಾಡುವೆ? ಕಾಯ ಮುಟ್ಟುವೊಡೆ ಕಾಣಬಾರದ ಘನವು ನಿಮ್ಮನೆಂತು ಕರಸ್ಥಲದಲಿ ಧರಿಸುವೆ? ಚೆನ್ನಮಲ್ಲಿಕಾರ್ಜುನಯ್ಯ, ನಾನೇನೆಂದರಿಯದೆ ನಿಮ್ಮ ನೋಡಿ ನೋಡಿ ಸೈವೆರೆಗಾಗುತಿರ್ದೆನು ೫೬. ಸಜ್ಜನವಾಗಿ ಮಜ್ಜನಕ್ಕೆರೆವೆ ಶಾಂತಳ...

ಅಕ್ಕನ ವಚನಗಳು - 41 ರಿಂದ 50 ರವರೆಗೆ

೪೧. ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ ಎನ್ನ ಭವಂ ನಾಸ್ತಿಯಾಯಿತ್ತು! ಎನ್ನ ತನ್ನಂತೆ ಮಾಡಿದ! ಎನಗೆ-ತನಗೆ ತೆರಹಿಲ್ಲದಂತೆ ಮಾಡಿ ತೋರಿದನು ನೋಡಾ! ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ ನಮ್ಮ ಗುರುಲಿಂಗದೇವ ಚೆನ್ನಮಲ್ಲಿಕಾರ್ಜುನ ೪೨. ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು ಜಯ ಜಯ ಗುರು ನಮೋ ಪರಮ ಗುರುವೆ ನಮೋ ನಮೋ ಚೆನ್ನಮಲ್ಲಿಕಾರ್ಜುನನ ತಂದೆನಗೆ ತೋರಿ ಕೊಟ್ಟ ಗುರುವೆ ನಮೋ ನಮೋ ೪೩. ನರ-ಜನ್ಮವ ತೊಡೆದು ಹರ-ಜನ್ಮವ ಮಾಡಿದ ಗುರುವೆ ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ ಕೊಟ್ಟ ಗುರುವೆ ನಮೋ ನಮೋ ೪೪. ಸಂಸಾರಸಾಗರದೊಳಗೆ ಬಿದ್ದೆ ನೋಡಾ ನಾನು ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು ಅಂಗ ವಿಕಾರದ ಸಂಗವ ನಿಲಿಸಿ ಲಿಂಗವನಂಗದ ಮೇಲೆ ಸ್ಥಾಪ್ಯವ...

ಅಕ್ಕನ ವಚನಗಳು - 31 ರಿಂದ 40 ರವರೆಗೆ

೩೧. ಊರ ಸೀರೆಗೆ ಅಗಸ ತಡಬಡಗೊಂಬಂತೆ ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು ನೆನೆನೆನೆದು ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ ೩೨. ದೇವ ಎನಗೆ ಭವಿಯ ಸಂಗವೆಂದು ಮಾಣ್ಪುದೆನ್ನ ತಂದೆ ದೇವ ಬೆರಕೆಯಿಲ್ಲದಚ್ಚಬಕುತಿ ಸುಖವದೆಂದು ತಂದೆ ಪೂಜೆಯೊಳಗೆ ಮೆಚ್ಚ ಬೆಚ್ಚ ಮನವನೆಂತು ತೆಗೆವೆನಯ್ಯ ಪೂಜೆಯೊಳಗೆ ನೆಟ್ಟ ದಿಟ್ಟಿಗಳನದೆಂತು ಕೀಳ್ವೆನಯ್ಯ [ಚೆನ್ನಮಲ್ಲಿಕಾರ್ಜುನ] ೩೩. ದೇವ ಶಿವಲಾಂಛನವನೇರಿಸಿಕೊಂಡು ಮನೆಗೆ ಬಂದವರಂ ಕಡೆಗಣಿಸೆ ಎಂತು ನೋಡುತಿರ್ಪೆನ್? ಆವರ್ಗೆ ಸತ್ಕಾರವಂ ಮಾಡಲಿಲ್ಲದಿರ್ದೊಡೆ ಎನ್ನನೀ ಧರೆಯ ಮೇಲಿರಿಸುವ ಕಾರಣವೇನಭವ? ನಿನ್ನವಳೆಂದೆನ್ನ ಮುದ್ದುತನವ ಸಲಿಸುವೊಡಿರಿಸುವುದು ಇಲ್ಲಾ ಕೈಲಸಕ್ಕೆ ಕೊಂಡೊಯ್ವುದು [ಚೆನ್ನಮಲ್ಲಿಕಾರ್ಜುನ] ೩೪. ಅಶನದಾಶಯಂ, ತೃಷೆಯ ತೃಷ್ಣೆಯಂ, ಬೆಸನದ ಬೇಗೆಯಂ, ವಿಷಯದ ವಿಹ್ವಳತೆಯಂ, ತಾಪತ್ರಯದ ಕಲ್ಪನೆಗಳಂ ಗೆಲಿದೆ ಇನ್ನೇನಿನ್ನೇನೆನ್ನಿಚ್ಛೆಯಾದುದು ಚೆನ್ನಮಲ್ಲಿಕಾರ್ಜುನ ನಿನಗಂಜೆನಂಜೆ ೩೫. ಶಿವನೇ, ಉಳಿವ ಕರೆವ ನೇಹವುಂಟೆ? ಸಂಸಾರಕ್ಕಂ ನಿಮ್ಮಲ್ಲಿ ಗೆಡೆಯಾಡುವ ಭಕ್ತಿಯುಂಟೇ? ಏನಯ್ಯ ಶಿವನೇ, ಏನೆಂದು ಪೇಳ್ವೆ ಲಜ್ಜೆಯ ಮಾತ, [ಚೆನ್ನಮಲ್ಲಿಕಾರ್ಜುನ] ೩೬. ಒಳಗೆ ಶೋಧಿಸಿ, ಹೊರಗೆ ಶುದ್ಧವಿಸಿ, ಒಳ-ಹೊರಗೆಂಬ ಉಭಯಶಂಕೆಯ ಕಳೆದು, ಸ್ಫಟಿಕದ ...

ಬಸವಣ್ಣನ ವಚನಗಳು - 191 ರಿಂದ 200 ರವರೆಗೆ

೧೯೧. ಓತಿ ಬೇಲಿವರಿದಂತೆನ್ನ ಮನವಯ್ಯ, ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು. ಬಾವಲ ಬಾಳುವೆಯಂತೆನ್ನ ಮನವು. ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ ನಾನಿಲ್ಲದ ಭಕ್ತಿಯ ಬಯಸಿದರುಂಟೆ ಕೂಡಲಸಂಗಮದೇವ. ೧೯೨. ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ ತೊಡೆಹದ ಕೆಲಸದ ಬಣ್ಣದಂತೆ! ಕಡಿಹಕ್ಕೆ ಒರಗೆ ಬಾರದು ನೋಡಾ! ಎನ್ನ ಮನದಲೊಂದು, ಹೃದಯದಲೊಂದು, ವಚನದಲೊಂದು ನೋಡಾ! ಕೂಡಲಸಂಗಮದೇವ, ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ! ೧೯೩. ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು ನಿನ್ನವರೊಲಿಯದನ್ನಕ ? ಶಿವ ಶಿವ ಮಹಾದೇವ! ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ ಕೂಡಲಸಂಗಮದೇವ. ೧೯೪. ಮುನ್ನೂರರವತ್ತು ದಿನ ಶರವ ಮಾಡಿ, ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ! ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ? ಕೊಡನ ತುಂಬಿದ ಹಾಲ ಕೆಡಹಿ ಉಡುಗಲೆನ್ನಳವೆ ಕೂಡಲಸಂಗಮದೇವ. ೧೯೫. ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ, ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ, ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದಂತೆ ಮಾಡಯ್ಯ. ೧೯೬. ಅಂಕ ಕಳನೇರಿ ಕೈಮರೆದಿದ್ದರೆ ಮಾರಂಕ ಬಂದಿರಿವುದು ಮಾಬನೆ ? ನಿಮ್ಮ ನೆನವ ಮತಿ ಮರೆದಿದ್ದರೆ ಪಾಪ ತನುವನಂಡಲೆವುದ ಮಾಬುದೆ...

ಬಸವಣ್ಣನ ವಚನಗಳು - 181 ರಿಂದ 190 ರವರೆಗೆ

೧೮೧. ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ, ನಿಮ್ಮ ನೆನೆಯಲು ತೆರಹಿಲ್ಲವಯ್ಯ. ಎಂತೊ ಲಿಂಗ ತಂದೆ, ಎಂತಯ್ಯ ಎನ್ನ ಪೂರ್ವಲಿಖಿತ ? ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ! ನೀ ಕರುಣಿಸು ಕೂಡಲಸಂಗಮದೇವ. ೧೮೨. ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ ಮನವೆ! ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೇ! ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೇ! ಕೂಡಲಸಂಗನ ಶರಣರ ಕಂಡು ಲಿಂಗವೆಂದೇ ನಂಬು ಮನವೇ! ೧೮೩. ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ! ಭವದ ಬಾಧೆಯ ತಪ್ಪಿಸಿಕೊಂಬಡೆ ನೀನು ನಿಯತವಾಗಿ ಭಯಭರಿತನಾಗಿ, ಅಹಂಕಾರಿಯಾಗದೆ ಶರಣೆನ್ನು ಮನವೇ! ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ ಕಿಂಕರನಾಗಿ ಬದುಕು ಮನವೇ. ೧೮೪. ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲೆದೇಕೆ ಮನವೇ ?! ಕಿಂಚಿತು ಗೀತ ಒಂದನಂತಕೋಟಿ ಜಪ! ಜಪವೆಂಬುದೇಕೆ ಮನವೇ ? ಕೂಡಲಸಂಗನ ಶರಣರ ಕಂಡು ಆಡಿ, ಹಾಡಿ ಬದುಕು ಮನವೇ! ೧೮೫. ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ! ಮನವೇ, ಲಿಂಗವ ನಂಬು ಕಂಡಾ! ಮನವೇ, ಜಂಗಮವ ನಂಬು ಕಂಡಾ! ಮನವೇ, ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ! ೧೮೬. ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ! ನರಮಾನವರು ಕೊಡುವರೆಂಬವನ ಬಾಯಲ್ಲಿ ಬಾಲಹುಳುಗಳು ಸುರಿಯವೆ ? ಮೂರು ...

ಬಸವಣ್ಣನ ವಚನಗಳು - 171 ರಿಂದ 180 ರವರೆಗೆ

೧೭೧. ಇತ್ತ ಬಾರೈ ಇತ್ತ ಬಾರೈಯೆಂದು ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು, ಮತ್ತೆ ಕೆಲಸಕ್ಕೆ ಹೋಗಿ, ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ; ಭೃತ್ಯಾಚಾರವ ನುಡಿದು ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ ಕೂಡಲಸಂಗಮದೇವ ಪ್ರಮಥರ ಮುಂದೆ. ೧೭೨. ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? ತನಗಾದ ಆಗೇನು ? ಅವರಿಗಾದ ಚೇಗೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವ. ೧೭೩. ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ ಕೇಳಿ ಪರಿಣಾಮಿಸಬೇಕು! ಅದೇನು ಕಾರಣವೆಂದರೆ-- ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ! ಎನ್ನ ಮನದ ತದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ! ೧೭೪. ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ. ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ, ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹಯ್ಯ ಕೂಡಲಸಂಗಮದೇವ. ೧೭೫. ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ! ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳುಕನ ಮಾಡಿ ಬೆಳುಗಾರದಂತೆ ಮಾಡು ಕೂಡಲಸಂಗಮದೇವ. ...

ಬಸವಣ್ಣನ ವಚನಗಳು - 161 ರಿಂದ 170 ರವರೆಗೆ

೧೬೧. ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ. ಮಾಡಿದೆನೆನ್ನದಿರಾ ಲಿಂಗಕ್ಕೆ! ಮಾಡಿದೆನೆನ್ನದಿರಾ ಜಂಗಮಕ್ಕೆ! ಮಾಡಿದೆನೆಂಬುದು ಮನದಲಿಲ್ಲದಿದ್ದರೆ ಬೇಡಿದ್ದನೀವ ಕೂಡಲಸಂಗಮದೇವ!! ೧೬೨. ಮಾಡುವಂತಿರಬೇಕು ಮಾಡದಂತಿರಬೇಕು! ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!! ನೋಡುವಂತಿರಬೇಕು, ನೋಡದಂತಿರಬೇಕು! ನೋಡುವ ನೋಟದೊಳಗೆ ತಾನಿಲ್ಲದಿರಬೇಕು!! ನಮ್ಮ ಕೂಡಲಸಂಗಮದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು! ೧೬೩. ಭಕ್ತನು ಶಾಂತನಾಗಿರಬೇಕು. ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು. ಭೂತಹಿತವಹ ವಚನವ ನುಡಿಯಬೇಕು. ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು. ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು. ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು. ಅಪಾತ್ರದಾನವಂ ಗೆಯ್ಯದಿರಬೇಕು. ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು. ಇದೇ ಮೊದಲಲ್ಲಿ ಬೇಹ ಶೌಚ ನೋಡಾ! ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ ಕೂಡಲಸಂಗಮದೇವ! ೧೬೪ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ. ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ! ಇದೇ ಬಹಿರಂಗಶುದ್ಧಿ! ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ. ೧೬೫. ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರಣ್ಣ. ಸತ್ಯವ ನುಡಿವುದೇ ದೇವಲೋಕ! ಮಿಥ್ಯವ ನುಡಿವುದೇ ಮರ್ತ...