Skip to main content

ಅಕ್ಕನ ವಚನಗಳು - 91 ರಿಂದ 100 ರವರೆಗೆ

೯೧.
ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?
ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ
ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ
೯೨.
ರತ್ನದ ಸಂಕೋಲೆಯಾದರೆ ತೊಡರಲ್ಲವೆ?
ಮುತ್ತಿನ ಬಲೆಯಾದರೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಯ ಹೊಯ್ದರೆ ಸಾಯದಿಪ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದರೆ
ಜನನಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ?
೯೩.
ಎರದ ಮುಳ್ಳಿನಂತೆ ಪರಗಂಡರೆನಗವ್ವ
ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನೆಚ್ಚಿ ಮಾತಾಡಲಮ್ಮೆನವ್ವ
ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವ
೯೪.
ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ
ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ
೯೫.
ತರಳಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸಾವಂತೆ-
ಎನಗೂ ಮನೆಯೇ? ಎನಗೂ ಧನವೇ?
ಎನ್ನ ಮನೆಮಠ ಕನಸ ಕಂಡುಕಣ್ತೆರೆದಂತಾಯಿತ್ತು
ಎನ್ನ ಮನದ ಸಂಸಾರವ ಮಾಣಿಸಾ ಚೆನ್ನಮಲ್ಲಿಕಾರ್ಜುನ






೯೬.
ತನುವನುವಾಯಿತ್ತು, ಮನವನುವಾಯಿತ್ತು
ಪ್ರಾಣವನುವಾಯಿತ್ತು ಮುನಿದು ಬಾರದ ಪರಿಯಿನ್ನೆಂತು ಹೇಳಾ!
ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ
ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ
ಕಾಣದೊಡೆ ಆನೆಂತು ಬದುಕುವೆನವ್ವ?
೯೭.
ಹಿಡಿವೆನೆಂದೊಡೆ ಹಿಡಿಗೆ ಬಾರನವ್ವ,
ತಡೆವೆನೆಂದೊಡೆ ಮೀರಿ ಹೋದನವ್ವ,
ಒಪ್ಪಚ್ಚಿ ಅಗಲಿದೊಡೆ ಕಳವಳಗೊಂಡೆ,
ಚೆನ್ನಮಲ್ಲಿಕಾರ್ಜುನನ ಕಾಣದೆ
ಆನಾರೆಂದರಿಯೆ ಕೇಳಾ ತಾಯೆ
೯೮.
ಮನ ಬೀಸರವಾದೊಡೆ ಪ್ರಾಣ ಪಲ್ಲಟವಹುದವ್ವ,
ತನುಕರಣಂಗಳು ಮೀಸಲಾಗಿ
ಮನ ಸಮರಸವಾಯಿತ್ತು ನೋಡಾ!
ಅನ್ಯವನರಿಯೆ, ಭಿನ್ನವನರಿಯೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ
ಬಳಿಯವಳಾನು ಕೇಳಾ ತಾಯೇ
೯೯.
ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವ
ಮೋಹಿಸಿ ಮುದ್ದಿಸಿ ಮರುಳಾದೆನವ್ವ
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು,
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದೊಡೆ ಆನೇವೇನವ್ವ
೧೦೦.
ಕಳಿವರಿದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ
ತಿಳುಹೌ ಬುದ್ಧಿಯ, ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ

Comments

Popular posts from this blog

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ...

ಸರ್ವಜ್ಞನ ವಚನಗಳು - 1 ರಿಂದ 10

ಸರ್ವಜ್ಞನ ವಚನಗಳು -  1 ರಿಂದ 20 ೧. ನಂದಿಯನು ಏರಿದನ ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ ಮುಂದೆ ಹೇಳುವೆನು ಸರ್ವಜ್ಞ ೨. ಮುನ್ನ ಕಾಲದಲಿ ಪನ್ನಗಧರನಾಳು ಎನ್ನೆಯ ಪೆಸರು, ಪುಷ್ಪದತ್ತನು ಎಂದು ಮನಿಪರು ದಯದಿ ಸರ್ವಜ್ಞ ೩. ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ ಮುದವ ಸಾರೆ, ಸರ್ವಜ್ಞನೆಂದೆನಿಸಿ ನಿಂದವನು ನಾನೆ ಸರ್ವಜ್ಞ ೪. ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ ಬಣ್ಣೆಸಿಬರೆದ ಪಟದೊಳಗೆಯಿರುವಾತ ತಣ್ಣೊಳಗೆ ಇರನೇ ಸರ್ವಜ್ಞ ೫. ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ ೬. ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ ೭. ಸರ್ವಜ್ಞನೆಂಬುವನು ಗರ್ವದಿಂದಾದವನೆ ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ೮. ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ ೯. ಊರಿಂಗೆ ದಾರಿಯನು ಆರು ತೋರಿದರೇನು? ಸಾರಾಯದಾ ನಿಜವ ತೋರುವ ಗುರುವು ತಾ ನಾರಾದರೇನು? ಸರ್ವಜ್ಞ ೧೦. ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು ಪರದೇಶಿಯಂತೆ ಇರುತಿರ್ಪಯೋಗಿಯನು ಪರಮಗುರುವೆಂಬೆ ಸರ್ವಜ್ಞ

ಅಕ್ಕನ ವಚನಗಳು - 301 ರಿಂದ 310 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೦೧. ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ! ನೀ ಮದುವಳಿಗನಾಗಿ ನಾ ಮದುವಳಿಗಿತಿಯಾಗಿ ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ, ಶ್ರೀಗಿರಿ ಚೆನ್ನಮಲ್ಲಿಕಾರ್ಜುನ ೩೦೨. ಬಸವನ ಭಕ್ತಿ ಕೊಟ್ಟಣದ ಮನೆ ಸಿರಿಯಾಳನ ಭಕ್ತಿ ಕಸಬಗೇರಿ ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ ಉಳಿದಾದ[+ಟ}ಮಟ ಉದಾಸೀನ ದಾಸೋಹ ಮಾಡುವವರ ದೈನ್ಯವೆಂಬ ಭೂತ ಸೋಂಕಿತು ಮಣ್ಣಿನ ಮನೆಯ ಕಟ್ಟಿ ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ ಮಾಡುವ ಮಾಟ ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ ನಡೆದವರು ಶಿವನಲ್ಲ ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು ಶ್ರೀಗಿರಿ ಚೆನ್ನಮಲ್ಲಿಕಾರ್ಜುನ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ ನಿರ್ವಯಲಾದೆ ಕಾಣಾ! ೩೦೩. ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ ಹೆಣ್ಣು-ಹೊನ್ನು-ಮಣ್ಣು ಮೂರನೂ ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ ಸಣ್ಣವರ ಸಮಾರಾಧನೆಯಾಯಿತು ತನ್ನನಿತ್ತು ತುಷ್ಟಿವಡೆವರನೆನಗೆ ತ...