Skip to main content

Posts

Showing posts from July 4, 2010

ಬಸವಣ್ಣನ ವಚನಗಳು - 21 ರಿಂದ 30 ರವರೆಗೆ

ಬಸವಣ್ಣನ ವಚನಗಳು - 21 ರಿಂದ 30 ರವರೆಗೆ ೨೧. ಅಂದಣವನೇರಿದ ಸೊಣಗನಂತೆ ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು, ಮೃಡ, ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯನೇ, ಕೂಡಲಸಂಗಮದೇವ, ನಿಮ್ಮ ಚರಣವ ನೆನೆವಂತೆ ಕರುಣಿಸು, ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ. ೨೨. ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ ಸಂಸಾರಸಂಗವ ಬಿಡದು ನೋಡೆನ್ನ ಮನವು. ಈ ನಾಯಿತನವ ಮಾಣಿಸು ಕೂಡಲಸಂಗಮದೇವಯ್ಯ ನಿಮ್ಮ ಧರ್ಮ. ೨೩. ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ; ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ. ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ. ೨೪. ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು- ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ? ೨೫. ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು. ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು ಕಿಚ್ಚಿನೊಳಿಕ್ಕುವೆನು. ೨೬. ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ; ನುಡಿವಲ್ಲಿ ಅಧಿಕನೆಂದೆನಿಸಿತ್ತು. ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ, ಕಡುಗೂಪ ಮಡದಿ ತಾ ಮುಟ್ಟಲಮ್ಮಳು; ಒಡಲನುರಿಗೊಂಬುದು: ಒಡವೆಯನರಸು