Skip to main content

Posts

Showing posts from November 26, 2010

ಸರ್ವಜ್ಞನ ವಚನಗಳು - 61 ರಿಂದ 70

ಸರ್ವಜ್ಞನ ವಚನಗಳು -  61 ರಿಂದ 70 ೬೧. ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು ಇಮ್ಮನವ ಪಿಡಿದು ಕೆಡಬೇಡ ವಿಧಿವಶವು ಸರಿಮ್ಮನೇ ಕೆಡಗು ಸರ್ವಜ್ಞ ೬೨. ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು? ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ ನಷ್ಟ ಕಾಣಯ್ಯ ಸರ್ವಜ್ಞ ೬೩. ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ ಬಟ್ಟೆಗೆ ಹೋಹ ಸರ್ವಜ್ಞ ೬೪. ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು? ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ ಕೊಟ್ಟಗುರಿದಂತೆ ಸರ್ವಜ್ಞ ೬೫. ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ ಹಸಿದು ಮಾಡುವನ ಪೂಜೆಯದು ಬೋಗಾರ ಪಸರ ವಿಟ್ಟಂತೆ ಸರ್ವಜ್ಞ ೬೬. ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು? ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ ಹತ್ತಿಗೇಡೆಂದ ಸರ್ವಜ್ಞ ೬೭. ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು ಕುಣಿಕೆಯುಂಟೆಂದ ಸರ್ವಜ್ಞ ೬೮. ಎಣಿಸುತಿರ್ಪುದು ಬೆರಳು ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ ಶುನಕನಂತಕ್ಕು ಸರ್ವಜ್ಞ ೬೯. ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ ಹೊಲೆಯ ಕಾಣಯ್ಯ ಸರ್ವಜ್ಞ ೭೦. ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ ಹಿಂಗದಿರುತಿಹುದು ಸರ್ವಜ್ಞ