೧೯೧. ಆವ ವಿದ್ಯೆಯ ಕಲಿತಡೇನು ಶವ ವಿದ್ಯೆ ಮಾಣದನ್ನಕ? ಅಶನವ ತೊಡೆದಡೇನು? ವ್ಯಸನವ ಮರೆದೆಡೇನು? ಉಸಿರಗಿಡಿದರೇನು? ಬಸಿರ ಕಟ್ಟಿದರೇನು? ಚೆನ್ನಮಲ್ಲಿಕಾರ್ಜುನದೇವಯ್ಯ ನೆಲದಳವಾರನಾದಡೆ ಕಳ್ಳನೆಲ್ಲಿ ಅಡಗುವ? ೧೯೨. ಹಡೆವುದರಿದು ನರಜನ್ಮವ ಹಡೆವುದರಿದು ಗುರುಕಾರುಣ್ಯವ ಹಡೆವುದರಿದು ಲಿಂಗಜಂಗಮಸೇವೆಯ ಚೆನ್ನಮಲ್ಲಿಕಾರ್ಜುನಯ್ಯನ ಶರಣ ಸಂಗದಲ್ಲಿ ನಲಿದಾಡು ಕಂಡೆಯಾ ಎಲೆ ಮನವೇ ೧೯೩. ಮಾಟಕೂಟ ಬಸವಣ್ಣಂಗಾಯಿತ್ತು ನೋಟಕೂಟ ಪ್ರಭುದೇವರಿಗಾಯಿತ್ತು ಭಾವಕೂಟ ಅಜಗಣ್ಣಂಗಾಯಿತ್ತು ಸ್ನೇಹಕೂಟ ಬಾಚಿರಾಜಂಗಾಯಿತ್ತು ಇವರೆಲ್ಲರ ಕೂಟ ಬಸವಣ್ಣಂಗಾಯಿತ್ತು ಎನಗೆ ನಿಮ್ಮಲ್ಲಿ ಅವಿರಳದ ಕೂಟ ಚೆನ್ನಮಲ್ಲಿಕಾರ್ಜುನಯ್ಯ ೧೯೪. ಮಾಟಕೂಟದಲ್ಲಿ ಬಸವಣ್ಣನಿಲ್ಲ ನೋಟಕೂಟದಲ್ಲಿ ಪ್ರಭುದೇವರಿಲ್ಲ ಭಾವಕೂಟದಲ್ಲಿ ಅಜಗಣ್ಣನಿಲ್ಲ ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ ಇವರೆಲ್ಲರ ಕೂಟದಲ್ಲಿ ಬಸವಣ್ಣನಿಲ್ಲ ಎನಗಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ? ೧೯೫. ಕದಳಿಯೆಂಬುದು ತನು! ಕದಳಿಯೆಂಬುದು ಮನ! ಕದಳಿಯೆಂಬುದು ವಿಷಯಂಗಳು ಕದಳಿಯೆಂಬುದು ಭವಘೋರಾರಣ್ಯ ಕದಳಿಯೆಂಬುದ ಗೆದ್ದು ತವ ಬದುಕೆ ಬಂದು ಕದಳಿಯ ಬನದಲ್ಲಿ ಭವಹರನ ಕಂಡೆನು ಭವಗೆಟ್ಟು ಬಂದ ಮಗಳೆಂದು ಕರುಣದಿಂ ತೆಗೆದು ಬಿಗಿಯಪ್ಪಿದರೆ ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು ೧೯೬. ಕರ್...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು