೧೦೧. ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ? ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ? ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ? ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ? ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ? ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು. ೧೦೨. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಕೂಡಲಸಂಗಮದೇವ. ೧೦೩. ಹೊತ್ತಾರೆಯೆದ್ದು ಶಿವಲಿಂಗದೇವನ ದೃಷ್ಟಿಯಾರೆ ನೋಡದವನ ಸಂಸಾರವೇನವನ ?! ಬಾಳುವೆಣನ ಬೀಳುವೆಣನ ಸಂಸಾರವೇನವನ ?! ನಡೆವೆಣನ ನುಡಿವೆಣನ ಸಂಸಾರವೇನವನ ?! ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ ಸಂಸಾರವೇನವನ ?! ೧೦೪. ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯ. ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ. ಮೊಲನಿಂದ ಕರಕಷ್ಟ ನರನ ಬಾಳುವೆ! ಸಲೆ ನಂಬೋ ನಮ್ಮ ಕೂಡಲಸಂಗಮದೇವನ. ೧೦೫. ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ? ಅಂತು ಬಲಿದ ಸಪ್ತಧಾತುವಿನ ನರಕದೇಹದೊಳಿಪ್ಪ ಹೇಸಿಕೆ ಸಾಲದೆ ? ಮತ್ತೆಯು ಪಾಪಂಗಳ ಮಾಡಿ ದುರಿತಂಗಳ ಹೆರುವ ಹೇಗತನವೇಕಯ್ಯ ? ಕಾಲನ ಕೈಯ ಬಡಿಸಿಕೊಂಡು ನರಕವನುಂಬುದು ವಿಧಿಯೇ, ಎಲೆ ಮನುಜ ? ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ! ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು