೯೧. ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ? ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ? ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ ೯೨. ರತ್ನದ ಸಂಕೋಲೆಯಾದರೆ ತೊಡರಲ್ಲವೆ? ಮುತ್ತಿನ ಬಲೆಯಾದರೆ ಬಂಧನವಲ್ಲವೆ? ಚಿನ್ನದ ಕತ್ತಿಯಲ್ಲಿ ತಲೆಯ ಹೊಯ್ದರೆ ಸಾಯದಿಪ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದರೆ ಜನನಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ? ೯೩. ಎರದ ಮುಳ್ಳಿನಂತೆ ಪರಗಂಡರೆನಗವ್ವ ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನೆಚ್ಚಿ ಮಾತಾಡಲಮ್ಮೆನವ್ವ ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವ ೯೪. ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ ೯೫. ತರಳಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ ತನ್ನ ನೂಲು ತನ್ನನೇ ಸುತ್ತಿ ಸಾವಂತೆ- ಎನಗೂ ಮನೆಯೇ? ಎನಗೂ ಧನವೇ? ಎನ್ನ ಮನೆಮಠ ಕನಸ ಕಂಡುಕಣ್ತೆರೆದಂತಾಯಿತ್ತು ಎನ್ನ ಮನದ ಸಂಸಾರವ ಮಾಣಿಸಾ ಚೆನ್ನಮಲ್ಲಿಕಾರ್ಜುನ ೯೬. ತನುವನುವಾಯಿತ್ತು, ಮನವನುವಾಯಿತ್ತು ಪ್ರಾಣವನುವಾಯಿತ್ತು ಮುನಿದು ಬಾರದ ಪರಿಯಿನ್ನೆಂತು ಹೇಳಾ! ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ ನಿಂದ ಎನ್...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು