Skip to main content

Posts

Showing posts from September 5, 2010

ಬಸವಣ್ಣನ ವಚನಗಳು - 141 ರಿಂದ 150 ರವರೆಗೆ

೧೪೧. ಆಡಿದರೇನೋ, ಹಾಡಿದರೇನೋ, ಓದಿದರೇನೋ- ತ್ರಿವಿಧ ದಾಸೋಹವಿಲ್ಲದನ್ನಕ ? ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ? ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ! ೧೪೨. ವೇದದಂತುಟಲ್ಲ, ಶಾಸ್ತ್ರದಂತುಟಲ್ಲ, ಗೀತ-ಮಾತಿನಂತುಟಲ್ಲ ಕೇಳಿರಯ್ಯ ! ಮಾತಿನ ಮಾತಿನ ಕೌಳುಗೋಲ ಶ್ರವದಲ್ಲಿ ಸತ್ತವರೊಳರೇ ಅಯ್ಯ ? ದಿಟದಲಗಿನ ಕಾಳೆಗವಿತ್ತಲಿದ್ದುದೇ ಕೂಡಲಸಂಗನ ಶರಣರು ಬಂದಲ್ಲಿ !? ೧೪೩. ಮಾತಿನ ಮಾತಿನಲಪ್ಪುದೇ ಭಕ್ತಿ ? ಮಾಡಿ ತನು ಸವೆಯದನ್ನಕ, ಧನ ಸವೆಯದನ್ನಕ, ಮನ ಸವೆಯದನ್ನಕ, ಅಪ್ಪುದೇ ಭಕ್ತಿ ? ಕೂಡಲಸಂಗಮದೇವನೆಲುದೋರ ಸರಸವಾಡುವನು; ಸೈರಿಸದನ್ನಕ ಅಪ್ಪುದೇ ಭಕ್ತಿ ? ೧೪೪. ಹಾವಸೆಗಲ್ಲ ಮೆಟ್ಟಿ ಹರಿದು ಗೊತ್ತ ಮುಟ್ಟ ಬಾರದಯ್ಯ. ನುಡಿದಂತೆ ನಡೆಯಲು ಬಾರದಯ್ಯ. ಕೂಡಲಸಂಗನ ಶರಣರ ಭಕ್ತಿ ಬಾಳ ಬಾಯಿಧಾರೆ. ೧೪೫. ಭಕ್ತಿಯೆಂಬುದ ಮಾಡಬಾರದು. ಗರಗಸದಂತೆ ಹೋಗುತ್ತ ಕೊರೆವುದು; ಬರುತ್ತ ಕೊಯ್ವುದು. ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ? ಕೂಡಲಸಂಗಮದೇವ. ೧೪೬. ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು ಒಂದು ಮಿಡುಕುರಲ್ಲಿ ಬೇವಂತೆ ಸಲೆನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ ಒಂದನಾಯತದಿಂದ ಕೆಡುವುದು! ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ ಅಧರ್ಮದಲ್ಲಿ ಕೆಡಿಸುವ ಸುತನಂತೆ ಶಿವನ ಸೊಮ್ಮ ಶಿವಂಗೆ ಮಾಡದೆ ಅನ್