Skip to main content

Posts

Showing posts from October 17, 2010

ಅಕ್ಕನ ವಚನಗಳು - 71 ರಿಂದ 80 ರವರೆಗೆ

೭೧. ಬಲ್ಲಿದ ಹಗೆಹ ತೆಗೆವನ್ನಬರ ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು ನೀ ಕಾಡಿ ಕಾಡಿ ನೋಡವನ್ನಬರ ಎನಗಿದು ವಿಧಿಯೇ ಹೇಳಾ ತಂದೆ ! ತೂರುವಾರುವನ್ನಬರ ಒಮ್ಮೆ ಗಾಳಿಗೆ ಹಾರಿ ಹೋದ ತೆರನಂತಾಯಿತ್ತು ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯ ಚೆನ್ನಮಲ್ಲಿಕಾರ್ಜುನ ? ೭೨. ಒಮ್ಮೆ ಕಾಮನ ಕಾಲಹಿಡಿವೆ, ಮತ್ತೂಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ ಸುಡಲೀ ವಿರಹವ ! ನಾನಾರಿಗೆ ಧೃತಿಗೆಡುವೆ ಚೆನ್ನಮಲ್ಲಿಕಾರ್ಜುನದೇವನೆನ್ನನೊಲ್ಲದ ಕಾರಣ ಎಲ್ಲರಿಗೆ ಹಂಗಿತಿಯಾದೆನವ್ವ ! ೭೩. ಚಿಲಿಮಿಲಿ ಎಂದೋದುವ ಗಿಳಿಗಳಿರಾ! ನೀವು ಕಾಣಿರೆ? ನೀವು ಕಾಣಿರೆ? ಸರವೆತ್ತಿ ಪಾಡುವ ಕೋಗಿಲೆಗಳಿರಾ ! ನೀವು ಕಾಣಿರೆ? ನೀವು ಕಾಣಿರೆ? ಎರಗಿ ಬಂದಾಡುವ ತುಂಬಿಗಳಿರಾ ! ನೀವು ಕಾಣಿರೆ? ನೀವು ಕಾಣಿರೆ? ಕೊಳನ ತಡಿಯಾಡುವ ಹಂಸಗಳಿರಾ ! ನೀವು ಕಾಣಿರೆ? ನೀವು ಕಾಣಿರೆ? ಗಿರಿಗಹ್ವರದೊಳಗಾಡುವ ನವಿಲುಗಳಿರಾ ! ನೀವು ಕಾಣಿರೆ? ನೀವು ಕಾಣಿರೆ? ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದ ಬಲ್ಲೆಡೆ ನೀವು ಹೇಳಿರೇ ! ೭೪. ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ, ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ ಕರೆದು ತೋರಿರೆ ೭೫. ವನವೆಲ್ಲ ನೀವೆ ವನದೊಳಗಣ ದೇವತರುವೆಲ್ಲ ನೀವೆ ತರುವಿನೊಳಗಾಡುವ ಖಗಮೃಗವೆಲ್ಲ ನೀವೆ ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೇಕೆ ಮುಖದೋರೆ?