೧೭೧. ಇತ್ತ ಬಾರೈ ಇತ್ತ ಬಾರೈಯೆಂದು ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು, ಮತ್ತೆ ಕೆಲಸಕ್ಕೆ ಹೋಗಿ, ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ; ಭೃತ್ಯಾಚಾರವ ನುಡಿದು ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ ಕೂಡಲಸಂಗಮದೇವ ಪ್ರಮಥರ ಮುಂದೆ. ೧೭೨. ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? ತನಗಾದ ಆಗೇನು ? ಅವರಿಗಾದ ಚೇಗೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವ. ೧೭೩. ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ ಕೇಳಿ ಪರಿಣಾಮಿಸಬೇಕು! ಅದೇನು ಕಾರಣವೆಂದರೆ-- ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ! ಎನ್ನ ಮನದ ತದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ! ೧೭೪. ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ. ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ, ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹಯ್ಯ ಕೂಡಲಸಂಗಮದೇವ. ೧೭೫. ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ! ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳುಕನ ಮಾಡಿ ಬೆಳುಗಾರದಂತೆ ಮಾಡು ಕೂಡಲಸಂಗಮದೇವ. ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು