೧೫೧. ಎನ್ನಂಗದಲಿ ಆಚಾರವ ತೋರಿದನಯ್ಯ ಬಸವಣ್ಣನು [ಆ] ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು ಎನ್ನ ಪ್ರಾಣದಲ್ಲಿ ಅರುಹ ತೋರಿದನಯ್ಯ ಬಸವಣ್ಣನು ಆ ಅರುಹೇ ಜಂಗಮವೆಂದರುಹಿದನಯ್ಯ ಬಸವಣ್ನನು [ಚೆನ್ನಮಲ್ಲಿಕಾರ್ಜುನ] [ಎನ್ನ] ಹೆತ್ತ ತಂದೆ ಸಂಗಬಸವಣ್ನನು ಎನಗೀ ಕ್ರಮವನರುಹಿದನಯ್ಯ ೧೫೨. ಗಂಗೆಯೊಡನಾಡಿದ ಗಟ್ಟ-ಬೆಟ್ಟಂಗಳು ಕೆಟ್ಟ ಕೇಡ ನೋಡಯ್ಯ ಅಗ್ನಿಯೊಡನಾಡಿದ ಕಾಷ್ಟಂಗಳು ಕೆಟ್ಟ ಕೇಡ ನೋಡಯ್ಯ ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ ಇಂತೀ ಪರಶಿವಮೂರ್ತಿ ಹರನೇ ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿಭವಂಗಳು ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ ೧೫೩. ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು ಇಳಿತಂದನಯ್ಯ ಶಿವನು ಕತ್ತಲೆಯ ಪಾತಾಳವ ರವಿ ಹೊಕ್ಕಂತಾಯಿತಯ್ಯ ಚಿತ್ತದ ಪ್ರವೃತ್ತಿಯ ಹಿಂಗಿಸಿ ಮುಕ್ತಿಪಥವ ತೋರಿದನಲ್ಲಾ ಅಸಂಖ್ಯಾತರುಗಳಿಗೆ ತನುವೆಲ್ಲ ಸ್ವಯಂಲಿಂಗ, ಮನವೆಲ್ಲ ಚರಲಿಂಗ ಭಾವವೆಲ್ಲ ಮಹಾಘನದ ಬೆಳಗು ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣಸಮ್ಯಜ್ಞಾನಿ ಚೆನ್ನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಎನ್ನ ಭಾವಂ ನಾಸ್ತಿಯಾಯಿತ್ತಯ್ಯ ಪ್ರಭುವೇ ೧೫೪. ಕಲ್ಯಾಣವೆಂಬುದಿನ್ನಾರಿಗೂ ಹೊಗಬಾರದು ಆಶೆ-ಆಮಿಷವನಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು ಒಳಗು-ಹೊರಗೂ ಶುದ್ಧವಾದಂಗಲ್ಲದೆ ಕಲ್ಯಾಣವ ಹೊಗಬಾರದು ನಾನೆಂಬುದು ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು ಒಳಗು ತಿಳಿದು ಚೆನ್ನಮಲ್ಲಿಕಾರ್ಜುನಂಗೊಲಿದು...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು