೧೩೧. ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ ಷಡುವರ್ಣಂಗಳೆಲ್ಲ ಹಗಲಿನ [ಪೂಜೆ] ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ, ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ ಇರುಳಿನ ಪೂಜೆ; ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ ಚೆನ್ನಮಲ್ಲಿಕಾರ್ಜುನ ೧೩೨. ಸಂಸಾರವ ನಿರ್ವಾಣವ ಮಾಡಿ, ಮನವ ವಜ್ರತುರಗವ ಮಾಡಿ, ಜೀವನ ರಾವುತನ ಮಾಡಿ, ಮೇಲಕ್ಕುಪ್ಪುವಡಿಸಲೀಯದೆ, ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ? ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ ಹಳಹಳನೆ ಹಳಚುತ್ತಿಪ್ಪುದಿದಾರಯ್ಯ? ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ ಆಧಾರಸ್ಥಾನದಿಂಗಳ ಮತ್ತೊಂದು ಬಂದು, ಪರಿಣಾಮವೆಂಬ ಧೂಪವನಿಕ್ಕಿ ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು ಗಗನಕ್ಕೆ ತಾಗುವುದು, ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ, ಮರೆಸಿದ ಮಾಣಿಕ್ಯವ ಕಾಣಬಹುದು, ಇದನಾರು ಬಲ್ಲರೆಂದರೆ ಹಮ್ಮಳಿದು ಇಹಪರವನರಿದು ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ ೧೩೩. ಲಿಂಗಕ್ಕೆ ಶರಣೆಂದು ಪೂಜಿ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು