೮೧. ಅಯ್ಯ ದೂರದಲಿರ್ದೆಹೆಯೆಂದು ಬಾಯಾರಿ ಬಳಲುತ್ತಿದ್ದೆನಯ್ಯ ನಾನು ಅಯ್ಯ ಸಾರೆ ಬಂದು ನೀನೆನ್ನ ಕರಸ್ಥಲದಲಿ ಮೂರ್ತಿಗೊಂಡರೆ ಇನ್ನಾರತಿಯೆಲ್ಲ ನಿನ್ನಲ್ಲಿ ಲಿಂಗಯ್ಯ ಆಲಿ ನಿಮ್ಮಲ್ಲಿ ನೆಟ್ಟವು ನೋಡಯ್ಯ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿ ನೋಡಿ ಕಂಗಳೇ ಪ್ರಾಣವಾಗಿದ್ದೆನಯ್ಯ ೮೨. ನಾನು ನಿನಗೊಲಿದೆ, ನೀನು ಎನಗೊಲಿದೆ ನೀನೆನ್ನನಗಲದಿಪ್ಪೆ, ನಾನಿನ್ನಗಲದಿಪ್ಪೆನಯ್ಯಾ ನಿನಗೆ ಎನಗೆ ಬೇರೊಂದು ಠಾವುಂಟೆ ನೀನು ಕರುಣಿಯೆಂಬುದು ಬಲ್ಲೆನು ನೀನಿರಿಸಿದ ಗತಿಯೊಳಗಿಪ್ಪವಳಾನು ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನ ೮೩. ಅಯ್ಯ ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ ಅಯ್ಯ ನೀನೊಲಿದರೆ ಒಲಿ, ಒಲಿಯದಿದ್ದರೆ ಮಾಣು ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ ಅಯ್ಯ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯ ಅಯ್ಯ ನೀ ನೋಡಿದರೆ ನೋಡು, ನೋಡದಿದ್ದರೆ ಮಾಣು ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ ನಾ ನಿಮ್ಮ ಪೂಜಿಸಿ ಹರುಷದಲೋಲಾಡುವೆನಯ್ಯ ೮೪. ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವ ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವ ಹಾಸಿದ ಹಾಸಿಗೆ ಹಂಗಿಲ್ಲದೇ ಹೋಯಿತ್ತು ಕೇಳವ್ವ ಚೆನ್ನಮಲ್ಲಿಕಾರ್ಜುನ ದೇವರ ದೇವನಂ ಕೂಡುವ ಕೂಟವ ನಾನೇನಂದರಿಯದೇ ಮರೆದೆ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು