೧೭೧. ಮರ ಮರ ಮಥನಿಸಿ ಕಿಚ್ಚು ಹುಟ್ಟಿ ಸುತ್ತಣ ತರುಮರಾದಿಗಳ ಸುಡಲಾಯಿತ್ತು ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು ಇಂತಪ್ಪ ಮಹಾನುಭಾವರ ಅನುಭಾವವ ತೋರಿ ಎನ್ನನುಳುಹಿಕೊಳ್ಳಾ, ಚೆನ್ನ ಮಲ್ಲಿಕಾರ್ಜುನ ೧೭೨. ಸಂಗದಿಂದಲ್ಲದೇ ಅಗ್ನಿ ಹುಟ್ಟದು ಸಂಗದಿಂದಲ್ಲದೇ ಬೀಜ ಮೊಳೆದೋರದು ಸಂಗದಿಂದಲ್ಲದೇ ದೇಹವಾಗದು ಸಂಗದಿಂದಲ್ಲದೇ ಸರ್ವಸುಖದೋರದು ಚೆನ್ನಮಲ್ಲಿಕಾರ್ಜುನದೇವಯ್ಯ, ನಿಮ್ಮ ಶರಣರ ಅನುಭವದ ಸಂಗದಿಂದಾನು ಪರಮಸುಖಿಯಯ್ಯಾ ೧೭೩. ಶಿವಭಕ್ತನ ಮನೆಯಂಗಳ ವಾರಣಾಸಿ ಎಂಬುದು ಹುಸಿಯೆ? ಶಿವಭಕ್ತನ ಮನೆಯಂಗಳದಲ್ಲಿ ಅಷ್ಟಷಷ್ಟಿ ತೀರ್ಥಂಗಳು ನೆಲಸಿಪ್ಪವಾಗಿ ಸುತ್ತಿಬರಲು ಶ್ರೀಶೈಲ, ಕಲಬಲದಲ್ಲಿ ಕೇದಾರ, ಅಲ್ಲಿಂದ ಹೊರಗೆ ಶ್ರೀ ವಾರಣಾಸಿ ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ ಎನ್ನ ದೇವ ಚೆನ್ನಮಲ್ಲಿಕಾರ್ಜುನ, ನಿಮ್ಮ ಭಕ್ತನ ಮನೆಯಂಗಳ ವಾರಣಾಸಿಯಿಂದಧಿಕ ನೋಡಾ! ೧೭೪. ಕಾಮನ ಗೆಲಿದೆನು, ಬಸವ, ನಿಮ್ಮ ದಯೆಯಿಂದ ಸೋಮಧರನ ಹಿಡಿಪ್ಪೆತನು, ಬಸವ, ನಿಮ್ಮ ಕೃಪೆಯಿಂದ ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು? ಭಾವಿಸಲು ಗಂಡು-ರೂಪು, ಬಸವ, ನಿಮ್ಮ ದಯದಿಂದದ ಅತಿಕಾಮಿ ಚೆನ್ನಮಲ್ಲಿಕಾರ್ಜುನಯ್ಯಂಗೆ ತೊಡರನಿಕ್ಕಿ ಎರಡರಿಯೆದೆ ಕೂಡಿದೆನು, ಬಸವ, ನಿಮ್ಮ ಕೃಪೆಯಿಂದ ೧೭೫. ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ ಮನದ ಭಂಗವ ಅರಿವಿನ ಮುಖದಿಂದ ಗೆಲಿದೆ ಜೀವದ ಭಂಗವ ಶಿವಾನುಭವದಿಂದ ಗೆಲಿದೆ ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು