Skip to main content

Posts

Showing posts from December 9, 2010

ಸರ್ವಜ್ಞನ ವಚನಗಳು - 191 ರಿಂದ 200

೧೯೧. ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ ಎರೆಯ ಮಣ್ಣಲ್ಲ ಸರ್ವಜ್ಞ ೧೯೨. ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ ಕುಂತಿಯಣುಗರು ತಿರಿದರು - ಮಿಕ್ಕವರು ಎಂತಿರ್ದರೇನು ಸರ್ವಜ್ಞ ೧೯೩. ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ ಕಳ್ಳಗೆ ನೃಪಗೆ ಸರ್ವಜ್ಞ ೧೯೪. ಕೊಡುವಾತನೇ ಮೃಢನು | ಪಡೆವಾತನೇ ನರನು ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ ಕೊಡು ಪಾತ್ರವನರಿದು ಸರ್ವಜ್ಞ ೧೯೫. ಅನ್ನವನಿಕ್ಕುವುದು | ನನ್ನಿಯನು ನುಡಿವುದು ತನ್ನಂತೆ ಪರರ ಬಗೆದೊಡೆ - ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ೧೯೬. ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ ನಾನೆನ್ನ ಗುರುವಿನೊಳಡಗಿ - ಸಂಸಾರ ತಾನದೆತ್ತಣದು ಸರ್ವಜ್ಞ ೧೯೭. ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ ಬಂಜನವಿರಲು ಸರ್ವಜ್ಞ ೧೯೮. ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ ಬಲ್ಲರೆ ಬಲ್ಲ ಸರ್ವಜ್ಞ ೧೯೯. ಏನಾದಡೇನಯ್ಯ | ತಾನಾಗದನ್ನಕ್ಕ ತಾನಾಗಿ ತನ್ನನರಿದಡೆ - ಲೋಕ ತಾ ನೇನಾದಡೇನು ಸರ್ವಜ್ಞ ೨೦೦. ಆನೆ ನೀರಾಟದಲಿ | ಮೀನ ಕಂಡಂಜುವುದೇ ಹೀನಮಾನವರ ಬಿರುನುಡಿಗೆ - ತತ್ವದ ಜ್ಞಾನಿ ಅಂಜುವನೆ ಸರ್ವಜ್ಞ