Skip to main content

Posts

Showing posts from July 1, 2011

ಸರ್ವಜ್ಞನ ವಚನಗಳು - 1 ರಿಂದ 10

ಸರ್ವಜ್ಞನ ವಚನಗಳು -  1 ರಿಂದ 20 ೧. ನಂದಿಯನು ಏರಿದನ ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ ಮುಂದೆ ಹೇಳುವೆನು ಸರ್ವಜ್ಞ ೨. ಮುನ್ನ ಕಾಲದಲಿ ಪನ್ನಗಧರನಾಳು ಎನ್ನೆಯ ಪೆಸರು, ಪುಷ್ಪದತ್ತನು ಎಂದು ಮನಿಪರು ದಯದಿ ಸರ್ವಜ್ಞ ೩. ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ ಮುದವ ಸಾರೆ, ಸರ್ವಜ್ಞನೆಂದೆನಿಸಿ ನಿಂದವನು ನಾನೆ ಸರ್ವಜ್ಞ ೪. ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ ಬಣ್ಣೆಸಿಬರೆದ ಪಟದೊಳಗೆಯಿರುವಾತ ತಣ್ಣೊಳಗೆ ಇರನೇ ಸರ್ವಜ್ಞ ೫. ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ ೬. ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ ೭. ಸರ್ವಜ್ಞನೆಂಬುವನು ಗರ್ವದಿಂದಾದವನೆ ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ೮. ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ ೯. ಊರಿಂಗೆ ದಾರಿಯನು ಆರು ತೋರಿದರೇನು? ಸಾರಾಯದಾ ನಿಜವ ತೋರುವ ಗುರುವು ತಾ ನಾರಾದರೇನು? ಸರ್ವಜ್ಞ ೧೦. ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು ಪರದೇಶಿಯಂತೆ ಇರುತಿರ್ಪಯೋಗಿಯನು ಪರಮಗುರುವೆಂಬೆ ಸರ್ವಜ್ಞ