೨೧೧. ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ! ನಾನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ? ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯ ?! ೨೧೨. ಮರದ ನೆಳಲಲ್ಲಿದ್ದು ತನ್ನ ನೆಳಲನರಸುವರೆ ? ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯ! ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯ! ನಾನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವ. ೨೧೩. ಎನಗಿಂತ ಕಿರಿಯರಿಲ್ಲ! ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ! ಕೂಡಲಸಂಗಮದೇವಾ ಎನಗಿದೇ ದಿಬ್ಯ. ೨೧೪. ಅರ್ಚಿಸಲರಿಯೆ, ಪೂಜಿಸಲರಿಯೆ, ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ! ಕಪ್ಪಡಿವೇಷದಿಂದಾನು ಬಂದಾಡುವೆ. ಕಪ್ಪಡಿವೇಷದಿಂದ, ಈಶ, ನಿಮ್ಮ ದಾಸರ ದಾಸಿಯ ದಾಸ ನಾನಯ್ಯ. ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯ. ಕೂಡಲಸಂಗಮದೇವ, ನಿಮ್ಮ ಲಾಂಛನವ ಧರಿಸಿಪ್ಪ ಉದರಪೋಷಕ ನಾನಯ್ಯ. ೨೧೫. ಅಪ್ಪನು ಡೋಹರ ಕಕ್ಕಯ್ಯನಾಗಿ, ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ? ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ ಭಕ್ತಿಯ ಸದ್ಗುಣವ ನಾನರಿಯೆನೆ ? ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ, ಎನಗಿದು ವಿಧಿಯೇ ಕೂಡಲಸಂಗಮದೇವ ? ೨೧೬. ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸಿದಿರಯ್ಯ! ಕಕ್ಕಯನೊಕ್ಕುದನಿಕ್ಕ ನೋಡಯ್ಯ, ದಾಸಯ್ಯ ಶಿವದಾನವನೆರೆಯ ನೋಡಯ್ಯ. ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ. ಉನ್ನತಮಹಿಮ ಕೂಡಲಸಂಗಮದೇವಾ ಶಿವಧೋ! ಶಿವಧೋ!! ೨೧೭. ಸೆಟ್...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು