೧೧೧. ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ, ಕಾಳ-ಬೆಳುದಿಂಗಳು-ಸಿರಿ ಸ್ಥಿರವಲ್ಲ! ಕೇಡಿಲ್ಲದ ಪದವಿಯನೀವ ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು. ೧೧೨. ಎಂತಕ್ಕೆ ಎಂತಕ್ಕೆ ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣವೋ! ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣವೋ! ಮರಳಿ ಭವಕ್ಕೆ ಬಹೆ ಬಾರದಿಹೆ! ಕರ್ತೃ ಕೂಡಲಸಂಗಂಗೆ ಶರಣೆನ್ನವೋ! ೧೧೩. ಶಕುನವೆಂದೆಂಬೆ ಅಪಶಕುನವೆಂದೆಂಬೆ, ನಿಮ್ಮವರು ಅಳಲಿಕಂದೇಕೆ ಬಂದೆ ? ನಿಮ್ಮವರು ಅಳಲಿಕಿಂದೇಕೆ ಹೋದೆ ? ನೀ ಹೋಹಾಗಳಕ್ಕೆ! ನೀ ಬಾಹಾಗಳಕ್ಕೆ! ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ. ೧೧೪. ನಿಮಿಷಂ ನಿಮಿಷಂ ಭೋ! ಕ್ಷಣದೊಳಗರ್ಧಂ ಭೋ! ಕಣ್ಣ ಮುಚ್ಚಿ ಬಿಚ್ಚುವಿನಿಸು ಬೇಗಂ ಭೋ ಸಂಸಾರದಾಗುಂ ಭೋ! ಸಂಸಾರದ ಹೋಗುಂ ಭೋ! ಸಂಸಾರದೊಪ್ಪಂ ಭೊ! ಕೂಡಲಸಂಗಮದೇವ ಮಾಡಿದ ಮಾಯಂ ಭೋ! ಅಭ್ರಚ್ಛಾಯಂ ಭೋ! ೧೧೫. ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು- ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯ; ನೆರೆಯದ ವಸ್ತು ನೆರೆವುದು ನೋಡಯ್ಯ; ಅರಸು ಪರಿವಾರ ಕೈವಾರ ನೋಡಯ್ಯ. ಪರಮನಿರಂಜನ ಮರೆವ ಕಾಲಕ್ಕೆ ತುಂಬಿದ ಹರವಿಯ ಕಲ್ಲು ಕೊಂಡಂತೆ ಕೂಡಲಸಂಗಮದೇವ. ೧೧೬. ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು! ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು! ಪುಣ್ಯಗಳಹ ಕಾಲಕ್ಕೆ ಹಾವು ನ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು