Skip to main content

Posts

Showing posts from September 4, 2010

ಬಸವಣ್ಣನ ವಚನಗಳು - 131 ರಿಂದ 140 ರವರೆಗೆ

೧೩೧. ಎರೆದರೆ ನೆನೆಯದು, ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ! ನೋಡಯ್ಯ, ಕೂಡಲಸಂಗಮದೇವಯ್ಯ, "ಜಂಗಮ"ಕ್ಕೆರೆದರೆ, "ಸ್ಥಾವರ" ನೆನೆಯಿತ್ತು. ೧೩೨. ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ; ಭೂಮಿಯಧಾರದಲ್ಲಿ ವೃಕ್ಷ ನೀರುಂಬುದಯ್ಯ. ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿಯಹುದಯ್ಯ "ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ತು ಜಂಗಮಃ! ಅಹಂ ತುಷ್ಟಿರುಮೇ ದೇವ್ಯು- ಭಯೋರ್ಜಂಗಮಲಿಂಗಯೋಃ ||" ಇದು ಕಾರಣ ಕೂಡಲಸಂಗನ ಶರಣರಲ್ಲಿ ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ. ೧೩೩. ಬಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೊಗಬಾರದು. ಕಳ್ಳನಾಣ್ಯ ಸಲಿಕೆಗೆ ಸಲ್ಲದು, ಕಳ್ಳನಾಣ್ಯವ ಸಲಲೀಯರಯ್ಯ. ಭಕ್ತಿಯೆಂಬ ಬಂಡಕ್ಕೆ ಜಂಗಮವೇ ಸುಂಕಿಗ ಕೊಡಲಸಂಗಮದೇವ. ೧೩೪. ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲ ಕೇಳಿರಣ್ಣ; ಹಾಗದ ಕೆರಹ ಹೊರಗೆ ಕಳೆದು ದೇಗುಲಕ್ಕೆ ಹೋಗಿ, ನಮಸ್ಕಾರವ ಮಾಡುವನಂತೆ, ತನ್ನ ಕೆರಹಿನ ಧ್ಯಾನವಲ್ಲದೆ, ದೇವರ ಧ್ಯಾನವಿಲ್ಲ; ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು! ಕೂಡಲಸಂಗನ ಶರಣರಿಗೆ ಸವೆಸಲೇಬೇಕು. ೧೩೫. ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ! ಉಂಡುದೇನಾಯಿತೆಂಬುದ ನಿನ್ನ ನೀ ತಿಳಿದು ನೋಡಾ! ಉಂಡುದಾಗಳೇ ಆ ಪೀಯವಾಯಿತ್ತು! ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು ಆನು ಮರುಗುವೆನಯ್ಯ ಕೂಡಲಸಂಗಮದೇವ.