೨೦೧. ಊರ ಸೀರೆಗೆ ಅಸಗ ಬಡಿವಡೆದಂತೆ ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು, ಎಂದು ಮರುಳಾದೆ. ನಿಮ್ಮನರಿಯದ ಕಾರಣ, ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ. ೨೦೨. ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯ. ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ! ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ? ಕೂಡಲಸಂಗಮದೇವ. ೨೦೩. ಹಗೆಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ ? ಕೋಳದ ಮೇಲೆ ಸಂಕಲೆಯನಿಕ್ಕುವರೆ ? ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ? ಕೂಡಲಸಂಗಯ್ಯ ಕಾಡುವ ಕಾಟ ಸಿರಿಯಾಳಂಗಲ್ಲದೆ ಸೈರಿಸಬಹುದೆ ? ೨೦೪. ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ, ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಲು ಬಾರದು. ಅರ್ಥಪ್ರಾಣಾಭಿಮಾನವಾರಿಗೆಯು ಸಮನಿಸದು, ಲಿಂಗಮುಖದಲುದಯವಾದ ಶರಣಂಗಲ್ಲದೆ, ಅಯ್ಯ, ಕೂಡಲಸಂಗನ ಶರಣರ ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು, ಹೇಳೆನ್ನ ತಂದೆ. ೨೦೫. ಬಾಣಮಯೂರರಂತೆ ಬಣ್ಣಿಸಲರಿಯೆ ಸಿರಿಯಾಳನಂತೆ ಉಣಲಿಕ್ಕಲರಿಯೆ ದಾಸಿಮಯ್ಯನಂತೆ ಉಡಕೊಡಲರಿಯೆ ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು, ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವ. ೨೦೬. ಎನ್ನ ತಪ್ಪನಂತಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲಯ್ಯ. ಇನ್ನು ತಪ್ಪಿದೆನಾದರೆ ನಿಮ್ಮ ಪಾದವೇ ದಿವ್ಯ ಕೂಡಲಸಂಗಮದೇವಯ್ಯ, ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣನೇ ಸಾಕ್ಷಿ! ೨೦೭. ಅಡಿಗಡಿಗೆ ಎನ್ನ ಮನವ ಜಡಿದು ನೋಡ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು