೨೨೧. ಮೇಲಾಗಲೊಲ್ಲೆ ಕೀಳಾಗಲೊಲ್ಲದೆ! ಕೀಳಿಂಗಲ್ಲದೆ ಹಯನು ಕರೆವುದೆ ? ಮೇಲಾಗಿ ನರಕದಲೋಲಾಡಲಾರೆನು! ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು ಮಹಾದಾನಿ ಕೂಡಲಸಂಗಮದೇವ. ೨೨೨. ಕಾಗೆ ವಿಷ್ಟಿಸುವ ಹೊನ್ನಕಳಶವಹುದರಿಂದ, ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ. ಅಯ್ಯ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ. "ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ ವಯಂತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ" ಕೂಡಲಸಂಗಮದೇವ ನಿಮ್ಮ ಸೆರಗೊಡ್ಡಿ ಬೇಡುವೆನು ಇದೊಂದೇ ವರವ ಕರುಣಿಸಯ್ಯ. ೨೨೩. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕ್ಕೆ ಭಾನುವಿನ ಉದಯದ ಚಿಂತೆ. ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ. ಎನಗೆ ನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ! ೨೨೪. ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ, ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ, ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು! ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು! ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ. ೨೨೫. ಸೂರ್ಯನುದಯ ತಾವರೆಗೆ ಜೀವಾಳ! ಚಂದ್ರಮನುದಯ ನೈದಿಲೆಗೆ ಜೀವಾಳ! ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ. ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ. ಕೂಡಲಸಂಗನ ಶರಣರ ಬರವೆನಗೆ ಪ್ರಾಣ-ಜೀವಾಳವಯ್ಯ. ೨೨೬. ಕಂಡರೆ ಮನೋಹರವಯ್ಯ, ಕಾಣದಿದ್ದರೆ ಅವಸ್ಥೆ ನೋಡಯ್ಯ. ಹಗಲು ಇರುಳಹುದು; ಇರುಳು ಹಗಲಹುದು. ಇರುಳು ಹಗಲೊಂದು ಜುಗ ಮೇಲೆ ಕೆಡೆದಂ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು