Skip to main content

Posts

Showing posts from November 22, 2010

ಸರ್ವಜ್ಞನ ವಚನಗಳು - 21 ರಿಂದ 30

ಸರ್ವಜ್ಞನ ವಚನಗಳು -  21 ರಿಂದ 30 ೨೧. ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು ನಂಜಿನಂತಕ್ಕು ಸರ್ವಜ್ಞ ೨೨. ಎಂಜಲೂ ಅಶೌಚ ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ ರಂಜನನ ನೆನೆಯೊ ಸರ್ವಜ್ಞ ೨೩. ಭೂತೇಶಗೆರಗುವನು ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ ದಾತ ಮಾದಿಗನು ಸರ್ವಜ್ಞ ೨೪. ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ ಕುಲಗೋತ್ರವುಂಟೆ? ಸರ್ವಜ್ಞ ೨೫. ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ? ಜಾತಂಗೆ ಜಾತನೆನಲೇಕೆ? ಅರುವಿಡಿ ದಾತನೇ ಜಾತ ಸರ್ವಜ್ಞ ೨೬. ಯಾತರ ಹೂವೇನು ? ನಾತವಿದ್ದರೆ ಸಾಕು ಜಾತಿಯಲಿ ಜಾತಿಯೆನಬೇಡ ಶಿವನೊಲಿ ದಾತನೆ ಜಾತ ಸರ್ವಜ್ಞ ೨೭. ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ ರಕ್ಕರವೇ ಸಾಕು ಸರ್ವಜ್ಞ ೨೮. ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ? ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು ಇಲ್ಲೆನ್ನಲರಿಯನು ಸರ್ವಜ್ಞ ೨೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚಂದ್ರಶೇಖರನು ಮುದಿ ಎತ್ತನೇರಿ ಬೇ ಕೆಂದುದನು ಕೊಡುವ ಸರ್ವಜ್ಞ ೩೦. ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು ಮಾರಸಂಹರನ ನೆನೆದರೆ ಮೃತ್ಯುವು ದೂರಕ್ಕೆ ದೂರ ಸರ್ವಜ್ಞ