೪೧. ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ ಎನ್ನ ಭವಂ ನಾಸ್ತಿಯಾಯಿತ್ತು! ಎನ್ನ ತನ್ನಂತೆ ಮಾಡಿದ! ಎನಗೆ-ತನಗೆ ತೆರಹಿಲ್ಲದಂತೆ ಮಾಡಿ ತೋರಿದನು ನೋಡಾ! ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ! ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ ನಮ್ಮ ಗುರುಲಿಂಗದೇವ ಚೆನ್ನಮಲ್ಲಿಕಾರ್ಜುನ ೪೨. ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು ಜಯ ಜಯ ಗುರು ನಮೋ ಪರಮ ಗುರುವೆ ನಮೋ ನಮೋ ಚೆನ್ನಮಲ್ಲಿಕಾರ್ಜುನನ ತಂದೆನಗೆ ತೋರಿ ಕೊಟ್ಟ ಗುರುವೆ ನಮೋ ನಮೋ ೪೩. ನರ-ಜನ್ಮವ ತೊಡೆದು ಹರ-ಜನ್ಮವ ಮಾಡಿದ ಗುರುವೆ ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ ಕೊಟ್ಟ ಗುರುವೆ ನಮೋ ನಮೋ ೪೪. ಸಂಸಾರಸಾಗರದೊಳಗೆ ಬಿದ್ದೆ ನೋಡಾ ನಾನು ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು ಅಂಗ ವಿಕಾರದ ಸಂಗವ ನಿಲಿಸಿ ಲಿಂಗವನಂಗದ ಮೇಲೆ ಸ್ಥಾಪ್ಯವ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು