Skip to main content

Posts

Showing posts from February 9, 2011

ಬಸವಣ್ಣನ ವಚನಗಳು - 431 ರಿಂದ 440 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೪೩೧. ಶಿವಾಚಾರವೆಂಬುದೊಂದು ಬಾಳ ಬಾಯಿಧಾರೆ ಲಿಂಗ ಮೆಚ್ಚಬೇಕು; ಜಂಗಮ ಮೆಚ್ಚಬೇಕು ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು. ಬಿಚ್ಚಿ ಬೇರಾದರೆ ಮೆಚ್ಚ ನಮ್ಮ ಕೂಡಲಸಂಗಮದೇವ. ೪೩೨. ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದರೇನಯ್ಯ ? ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದರೇನಯ್ಯ ? ಸುಚರಿತ್ರರೆಂತಿದ್ದರೇನಯ್ಯ ? ಅವಲೋಹವ ಕಳೆವ ಪರುಷವೆಂತಿದ್ದರೇನಯ್ಯ ? ಕೂಡಲಸಂಗನ ಶರಣರು ರಸದ ವಾರಿಧಿಗಳು ಎಂತಿದ್ದರೇನಯ್ಯ ? ೪೩೩. ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದರಲ್ಲಿ ಚೆನ್ನ! ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ! ಪ್ರಸಾದಿಗಳೊಳಗೆ ಚೆನ್ನ! ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು ಕೂಡಲಸಂಗಮದೇವರಿಗೆ ಬೇಕಾಯಿತ್ತೆಂದು ಕೈದೆಗೆದ ನಮ್ಮ ಚೆನ್ನ! ೪೩೪. ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ. ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ. ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ. ಇಂತೀ ತ್ರಿವಿಧಗುಣವನರಿದಾತನು ಅಚ್ಚಲಿಂಗೈಕ್ಯನು ಕೂಡಲಸಂಗಮದೇವ. ೪೩೫. ಪ್ರಾಣಲಿಂಗಪ್ರತಿಗ್ರಾಹಕನಾದ ಬಳಿಕ ಲಿಂಗವಿರಹಿತವಾಗಿ ನಡೆವ ಪರಿಯೆಂತೊ ?