೧೬೧. ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ. ಮಾಡಿದೆನೆನ್ನದಿರಾ ಲಿಂಗಕ್ಕೆ! ಮಾಡಿದೆನೆನ್ನದಿರಾ ಜಂಗಮಕ್ಕೆ! ಮಾಡಿದೆನೆಂಬುದು ಮನದಲಿಲ್ಲದಿದ್ದರೆ ಬೇಡಿದ್ದನೀವ ಕೂಡಲಸಂಗಮದೇವ!! ೧೬೨. ಮಾಡುವಂತಿರಬೇಕು ಮಾಡದಂತಿರಬೇಕು! ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!! ನೋಡುವಂತಿರಬೇಕು, ನೋಡದಂತಿರಬೇಕು! ನೋಡುವ ನೋಟದೊಳಗೆ ತಾನಿಲ್ಲದಿರಬೇಕು!! ನಮ್ಮ ಕೂಡಲಸಂಗಮದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು! ೧೬೩. ಭಕ್ತನು ಶಾಂತನಾಗಿರಬೇಕು. ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು. ಭೂತಹಿತವಹ ವಚನವ ನುಡಿಯಬೇಕು. ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು. ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು. ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು. ಅಪಾತ್ರದಾನವಂ ಗೆಯ್ಯದಿರಬೇಕು. ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು. ಇದೇ ಮೊದಲಲ್ಲಿ ಬೇಹ ಶೌಚ ನೋಡಾ! ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ ಕೂಡಲಸಂಗಮದೇವ! ೧೬೪ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ. ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ! ಇದೇ ಬಹಿರಂಗಶುದ್ಧಿ! ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ. ೧೬೫. ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರಣ್ಣ. ಸತ್ಯವ ನುಡಿವುದೇ ದೇವಲೋಕ! ಮಿಥ್ಯವ ನುಡಿವುದೇ ಮರ್ತ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು