Skip to main content

Posts

Showing posts from November 19, 2010

ಅಲ್ಲಮಪ್ರಭುವಿನ ವಚನಗಳು : 111 ರಿಂದ 120

೧೧೧. ಅಱಿದಱಿದು ಅಱಿವು ಬಱುದೊಱಿವೋಯಿತ್ತು ! "ಕುಱುಹ[ತೋಱ]ದಡೆಂತೂ ನಂಬರು, ತೆಱಹಿಲ್ಲದ ಘನವ ನೆನೆದು ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು ಗುರು ಕುಱುಹ ತೋಱಿದನಲ್ಲದೆ ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ. ೧೧೨. ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ ಮೂಲ ಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹಶಿವಪುರದಲ್ಲಿ ! ವಾಯು ಪೂಜಾರಿಯಾಗಿ ಪರಿಮಳದಿಂಡೆದಂಡೆಯ ಕಟ್ಟಿ ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು. ೧೧೩. ಕಾಲೇ ಕಂಭಗಳಾದವೆನ್ನ ದೇಹವೇ ದೇಗುಲವಾದುವಯ್ಯ ! ಎನ್ನ ನಾಲಗೆಯೆ ಘಂಟೆ ಶಿರ ಸುವರ್ಣದ ಕಳಸವಿದೇನಯ್ಯ ! ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು ! ಗುಹೇಶ್ವರ, ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ. ೧೧೪. ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ ಆಕಾಶಗಂಗೆಯಲ್ಲಿ ಮಜ್ಜನ ಹೂವಿಲ್ಲದ ಪರಿಮಳದ ಪೂಜೆ ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ ಇದು ಅದ್ವೈತ ಕಾಣಾ ಗುಹೇಶ್ವರ. ೧೧೫. ಹೊತ್ತಾರೆ ಪೂಜಿಸಲುಬೇಡ ಕಂಡಾ ! ಬೈಗೆ ಪೂಜಿಸಲುಬೇಡ ಕಂಡಾ ! ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ ! ಇಂತಪ್ಪ ಪೂಜೆಯ ಪೂಜಿಸುವರ ಎನಗೆ ತೋಱಯ್ಯ ಗುಹೇಶ್ವರ. ೧೧೬. ಅಂಗದಲ್ಲಿ ಮಾಡುವ ಸುಖವದು ಲಿಂಗಕ್ಕೆ ಭೂಷಣವಾಯಿತ್ತು. ಕಾಡುಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸುವಂತೆ- ಹಿಂದೆ ಮೆದೆಯಿಲ್ಲ ! ಮು