೧೨೧. ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ! ದೇವಪೂಜೆಯ ಮಾಟ ದುರಿತಬಂಧನದೋಟ! ಶಂಭು ನಿಮ್ಮಯ ನೋಟ ಹೆರೆಹಿಂಗದ ಕಣ್ಬೇಟ!! ಸದಾ ಶಿವಲಿಂಗಸನ್ನಿಹಿತನಾಗಿಪ್ಪುದು, ಶರಣೆಂದು ನಂಬುವುದು. ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ!!! ೧೨೨. ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯ! ವೇದಪ್ರಿಯಶಿವನೆಂಬರು ವೇದಪ್ರಿಯ ಶಿವನಲ್ಲಯ್ಯ! ನಾದವ ಮಾಡಿದ ರಾವಣಂಗೆ ಆರೆಯಾಯುಷವಾಯಿತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು. ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. ೧೨೩. ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೊಬ್ಬರ ಕೈಯಲು ಮಾಡಿಸಬಹುದೇ ? ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವನು ತಾ ಮಾಡಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲು ಮಾಡಿಸಬಹುದೇ ? ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ. ೧೨೪. ಬಂಡಿ ತುಂಬಿದ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ. ತಾಪತ್ರಯವ ಕಳೆದು ಪೂಜಿಸಿ: ತಾಪತ್ರಯವ ಲಿಂಗನೊಲ್ಲ! ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ ? ೧೨೫. ಕನ್ನಡಿಯ ನೋಡುವ ಅಣ್ಣಗಳಾ, ಜಂಗಮವ ನೋಡಿರೇ! ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ. ಸ್ಥಾವರ ಜಂಗಮ ಒಂದೆಂದುದು ಕೂಡಲಸಂಗನ ವಚನ. ೧೨೬. ಗೀತವ ಹಾಡಿದರೇನು, ಶಾಸ್ತ್ರ ಪುರಾಣವ ಕೇಳಿ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು