೧೨೧. ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ ೧೨೨. ಹೆದರದಿರು ಮನವೇ, ಬೆದರದಿರು ಮನವೇ ನಿಜವನರಿತು ನಿಶ್ಚಿಂತವಾಗಿರು ಫಲವಾದ ಮರನ ಇಡುವುದೊಂದು ಕೋಟಿ ಎಲವದ ಮರನ ಇಡುವರೊಬ್ಬರ ಕಾಣೆ ಭಕ್ತಿಯುಳ್ಳವರ ಬೈವರೊಂದು ಕೋಟಿ, ಭಕ್ತಿಯಿಲ್ಲದವ ಬೈವರೊಬ್ಬರ ಕಾಣೆ ನಿಮ್ಮ ಶರಣರ ನುಡಿಯೆ ಎನಗೆ ಗತಿಸೋಪಾನ, ಚೆನ್ನಮಲ್ಲಿಕಾರ್ಜುನ ೧೨೩. ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದರೆ ಕನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ! ಬೊಬ್ಬುಲಿಯನೇರಿದ ಮರ್ಕಟನಂತೆ ಹಣ್ಣ ಮೆಲಲಿಲ್ಲ, ಕುಳ್ಳಿರೆ ಠಾವಿಲ್ಲ! ನಾನು ಸರ್ವಸಂಗಪರಿತ್ಯಾಗ ಮಾಡಿದವಳಲ್ಲ ನಿಮ್ಮ ಕೂಡಿ ಕುಲವಳಿದವಳಲ್ಲ ಚೆನ್ನಮಲ್ಲಿಕಾರ್ಜುನ ೧೨೪. ಕೈಸಿರಿಯ ದಂಡವ ಕೊಳಬಹುದಲ್ಲದೆ ಮೈಸಿರಿಯ ದಂಡವ ಕೊಳಲುಂಟೆ? ಉಟ್ಟಂತ ಉಡಿಗೆತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಲೊಳಬಹುದೇ? ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡಿಗೆತೊಡಿಗೆಯ ಹಂಗೇಕೊ ಮರುಳ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು