೨೭೧. ಆವನಾದರೇನು ? ಶ್ರೀಮಹಾದೇವನ ನೆನೆವನ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಕಾಯ್ದು ಬದುಕುವೆ ಕೂಡಲಸಂಗಮದೇವ. ೨೭೨. ನಾನು ಹೊತ್ತ ಹುಳ್ಳಿಯನಂಬಲಿಗೆ ಕೊಂಬವರಿಲ್ಲ ನೋಡಯ್ಯ. ಆನು ನಿಮ್ಮ ಶರಣರ ಒಕ್ಕುದನುಂಡು ಬದುಕುವೆನಯ್ಯ. ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವ. ೨೭೩. ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ. ಅವರೊಕ್ಕುದನುಂಡು, ಮಿಕ್ಕುದನಾಯ್ದುಕೊಂಡಿಪ್ಪ ಕಾರಣ- ಕಾಲ ಮುಟ್ಟಲಮ್ಮದು, ಕಲ್ಪಿತ ತೊಡೆಯಿತ್ತು; ಭವಬಂಧನ ಹಿಂಗಿತ್ತು, ಕರ್ಮನಿರ್ಮಳವಾಯಿತ್ತು. ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು ಕೂಡಲಸಂಗಮದೇವನು ಇತ್ತ ಬಾ ಎಂದೆತ್ತಿಕೊಂಡನು. ೨೭೪ ಜನ್ಮ ಜನ್ಮಕ್ಕೆ ಹೋಗಲೀಯದೆ, "ಸೋಹಂ" ಎಂದೆನಿಸದೆ, 'ದಾಸೋಹಂ' ಎಂದೆನಿಸಯ್ಯ. ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯ ಕೂಡಲಸಂಗಮದೇವ. ೨೭೫. ಕರ್ತರು ನಿಮ್ಮ ಗಣಂಗಳು, ಎನ್ನ ತೊತ್ತ ಮಾಡಿ ಸಲಹಿದ ಸುಖವು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯದುಂತುಟಲ್ಲ ಕೇಳಿರಯ್ಯ, ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು. ೨೭೬. ತೊತ್ತಿಂಗೆ ಬಲ್ಲಹನೊಲಿದರೆ ಪದವಿಯನೀಯದೆ ಮಾಬನೆ ? ಅಯ್ಯ, ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬ ದೇವನೆ ? ಅಯ್ಯ, ಮಾದರ ಚೆನ್ನಯ್ಯಂಗೆ ಡೋಹರಕಕ್ಕಯ್ಯಂಗೆ, ತೆಲುಗ ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ ? ಅಯ್ಯ, ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು