Skip to main content

Posts

Showing posts from October 28, 2010

ಅಕ್ಕನ ವಚನಗಳು - 181 ರಿಂದ 190 ರವರೆಗೆ

೧೮೧. ಗಟ್ಟಿದುಪ್ಪಕ್ಕೆ ತಿಳಿದುಪ್ಪಕ್ಕೆ ಭೇದವುಂಟೇ ಅಯ್ಯ? ದೀಪಕ್ಕೆ ದೀಪ್ತಿಗೆ ಭೇದವುಂಟೇ ಅಯ್ಯ? ಆತ್ಮಕ್ಕೆ ಅಂಗಕ್ಕೆ ಭೇದವುಂಟೇ ಅಯ್ಯ ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋರಿದನಾಗಿ ಸಾವಯವಕ್ಕೆ ನಿರವಯವಕ್ಕೆ ಭಿನ್ನವಿಲ್ಲವಯ್ಯ! ಚೆನ್ನಮಲ್ಲಿಕಾರ್ಜುನದೇವರ ಬೆರೆಸಿ ಮತಿಗೆಟ್ಟವಳ ಏನ ನುಡಿಸುವಿರಯ್ಯ? ೧೮೨. ಕೆಂಡವ ಶವದಂತೆ ಸೂತ್ರ ತಪ್ಪಿದ ಬೊಂಬೆಯಂತೆ ಜಲವರತ ತಟಾಕದಂತೆ ಬೆಂದ ನುಲಿಯಂತೆ- ಮತ್ತೆ ಹಿಂದಣಂಗ ಉಂಟೇ ಅಣ್ಣ ಚೆನ್ನಮಲ್ಲಿಕಾರ್ಜುನನಂಗವೇ ಆಶ್ರಯವಾದವಳಿಗೆ?! ೧೮೩. ಫಲ ಒಳಗೆ ಪಕ್ವವಾಗಿಯಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು ಆ ಭಾವದಿಂದ ಮುಚ್ಚಿದೆ ಇದಕೆ ನೋವೇಕೆ? ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನದೇವನ ಒಳಗಾದವಳ ೧೮೪. ನಾಣ ಮರೆಯ ನೂಲು ಸಡಿಲೆ ನಾಚುವರು ನೋಡಾ ಗಂಡು-ಹೆಣ್ಣೆಂಬ ಜಾತಿ ಪ್ರಾಣದೊಡೆಯ ಜಗದೊಳಗೆ ಮುಳುಗುತ್ತ ತೆರಹಿಲ್ಲದಿರಲು ದೇವರ ಮುಂದೆ ನಾಚಲುಂಟೆ? ಚೆನ್ನಮಲ್ಲಿಕಾರ್ಜುನಂಗೆ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮೆರೆಸಬಹುದೆ ಹೇಳಯ್ಯ ೧೮೫. ಎಲ್ಲಿ ಹೋದರೂ ಕಲಿಗೆ ಭಯವಿಲ್ಲ ಹಂದೆಗೆ ಸುಖವಿಲ್ಲ ಕೇಳಿರಣ್ಣ! ಈವಂಗವಗುಣವಿಲ್ಲ, ಕರುಣ ಉಳ್ಳವಂಗೆ ಪಾಪವಿಲ್ಲ ಇನ್ನು ಪರಧನ-ಪರಸ್ತ್ರೀಯ ತೊರೆದಾತಂಗೆ ಮುಂದೆ ಭವವಿಲ್ಲ, ಚೆನ್ನಮಲ್ಲಿಕಾರ್ಜುನ