Skip to main content

ಬಸವಣ್ಣನ ವಚನಗಳು - 171 ರಿಂದ 180 ರವರೆಗೆ


೧೭೧.
ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.

೧೭೨.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.

೧೭೩.
ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ--
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!

೧೭೪.
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.

೧೭೫.
ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.








೧೭೬.
ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.

೧೭೭.
ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.

೧೭೮.
ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ - ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.

೧೭೯.
ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?

೧೮೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.

Comments

Popular posts from this blog

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ...

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ...