Skip to main content

ಅಕ್ಕನ ವಚನಗಳು - 61 ರಿಂದ 70 ರವರೆಗೆ

೬೧.
ಪೃಥ್ವಿಯ ಗೆಲಿದ ಏಲೇಶ್ವರನ ನಾನು ಕಂಡೆ
ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ನಾನು ಕಂಡೆ
ಸತ್ವ-ರಜ-ತಮ-ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ
ಅಂತರಂಗ-ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ನಾನು ಕಂಡೆ
ಇವರೆಲ್ಲರ ಮಧ್ಯಸ್ಥಾನ ಪ್ರಾಣಲಿಂಗವೆಂದು
ಸುಜ್ಞಾನದಲ್ಲಿ ತೋರಿದ ಆ ಬಸವಣ್ಣನ ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯ
೬೨.
ಅಪಾರ ಗಂಭೀರದ ಅಂಬುಧಿಯಲ್ಲಿ
ತಾರಾಪಥವ ನೋಡಿ ನಡೆಯೆ
ಭೈತ್ರದಿಂದ ದ್ವೀಪಾಂತರಕ್ಕೆ ಸಕಲಪದಾರ್ಥನವೆಯ್ದಿಸುವುದು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ
ತುರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು
೬೩.
ಕ್ರೀಯೊಳ್ಳುಡೊಂತೊಂದಾಸೆ
ಸದ್ಭಕ್ತರ ನುಡಿಗಡಣ ಉಳ್ಳೊಡಂತೊಂದಾಸೆ
ಶ್ರೀಗಿರಿಯನೇರಿ ನಿಮ್ಮ ಬೆರೆಸಿದರೆ ಎನ್ನಾಸೆಗೆ ಕಡೆಯೇ ಅಯ್ಯ?
ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯ
೬೪.
ಆರೂ ಇಲ್ಲದವಳೆಂದು
ಅಳಿಗೊಳಲು ಬೇಡ ಕಂಡಯ್ಯ
ಏನ ಮಾಡಿದೆಡೆಯೂ ನಾನಂಜುವಳಲ್ಲ!
ತರಗೆಲೆಯ ಮೆಲಿದು ನಾನಿಹೆನು
ಸುರಗಿಯ ಮೇಲೆರಗಿ ನಾನಿಹೆನು
ಚೆನ್ನಮಲ್ಲಿಕಾರ್ಜುನಯ್ಯ
ಕರ ಕಡೆ ನೋಡಿದಡೆ
ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಿಹೆನು
೬೫.
ಕಿಡಿಕಿಡಿ ಕೆದರಿದಡೆ
ಎನಗೆ ಹಸಿವು ತೃಷೆ ಅಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ
ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ, ಶಿರ ಹರಿದು ಬಿದ್ದಡೆ ಪ್ರಾಣ
ನಿಮಗರ್ಪಿತವೆಂಬೆನು






೬೬.
ನಚ್ಚುಗೆ ಮನ ನಿಮ್ಮಲ್ಲಿ ಮೆಚ್ಚುಗೆ ಮನ ನಿಮ್ಮಲ್ಲಿ
ಸಲುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇದ್ರಿಯಗಳು ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರೆಸುಗೆ ಚೆನ್ನಮಲ್ಲಿಕಾರ್ಜುನಯ್ಯ
೬೭.
ಒಡಲಿಲ್ಲದ, ನುಡಿಯಿಲ್ಲದ, ಕಡೆಯಿಲ್ಲದ
ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯ
ಭಾಷೆ ಪೈಸರವಿಲ್ಲ ಓಸರಿಸೆನನ್ಯಕ್ಕೆ
ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ
ಆರಳಿದು ಮೂರಾಗಿ, ಮೂರಳಿದು ಎರಡಾಗಿ,
ಎರಡಳಿದು ಒಂದಾಗಿ ನಿಂದೆನಯ್ಯ
ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ
ಪ್ರಭುವಿನಿಂದ ಕೃತಕೃತ್ಯಳಾದೆನು ನಾನು
ಮರೆಯಲಾಗದು ನಾನು ನಿಮ್ಮ ಶಿಶುವೆಂದು
ಚೆನ್ನಮಲ್ಲಿಕಾರ್ಜುನನ ಬೆರೆಸೆಂದು
ಎನ್ನ ಹರಸುತ್ತಿಹುದು
೬೮.
ಹೊಳೆವ ಕೆಂಜೆಡೆಗಳ ಮಣಿಮುಕುಟದ
ಒಪ್ಪುವ ಸುಲಿಪಲ್ಗಳ ನಗೆಮೊಗದ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪನಂ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆಂದೆನಗೆ
ಗಂಡ ಗಂಡರನ್ನೆಲ್ಲ ಹೆಂಡಹೆಂಡಿರಾಗಿ ಆಳುವ
ಗುರುವನ ಕಂಡೆ ನಾನು !
ಜಗದಾದಿ ಶಕ್ತಿಯೊಳು ಬೆರೆಸಿ ಒಡನಾಡುವ
ಪರಮ ಗುರು ಚೆನ್ನಮಲ್ಲಿಕಾರ್ಜುನನ ನಿಲುವ ಕಂಡು ಬದುಕಿದೆನು
೬೯.
ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವ
ಏರಿಲ್ಲದ ಘಾಯದಲಿ ನೊಂದೆನವ್ವ
ಸುಖವಿಲ್ಲದ ಧಾವತಿಗೊಂಡೆನವ್ವ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ
೭೦.
ಬೆರಸುವಡೆ ಬೇಗ ತೋರ! ಹೊರಹಾಕದಿರಯ್ಯ!
ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು, ಎನ್ನ ಹೊರಹಾಕದಿರಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ನಂಬಿ
ಬೆಂಬಳಿ ಬಂದೆನು ಇಂಬುಗೊಳ್ಳಯ್ಯ ಬೇಗದಲಿ

Comments

Popular posts from this blog

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ಜರಿದ

ಬಸವಣ್ಣನ ವಚನಗಳು - 371 ರಿಂದ 380 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೭೧. ಜಂಬೂದ್ವೀಪನವಖಂಡಪೃಥ್ವಿಯೊಳಗೆ ಕೇಳಿರಯ್ಯ ಎರಡಾಳಿನ ಭಾಷೆಯ! ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ. ೩೭೨. ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ ನುಗ್ಗುಮಾಡುವ, ನುಸಿಯ ಮಾಡುವ! ಮಣ್ಣುಮಾಡುವ, ಮಸಿಯ ಮಾಡುವ! ಕೂಡಲಸಂಗಮದೇವರ ನೆರೆನಂಬಿದನಾದರೆ ಕಡೆಗೆ ತನ್ನಂತೆ ಮಾಡುವ. ೩೭೩. ಅರೆವನಯ್ಯ ಸಣ್ಣವಹನ್ನಕ ಒರೆವನಯ್ಯ ಬಣ್ಣಗಾಬನ್ನಕ ಅರೆದರೆ ಸುಣ್ಣವಾಗಿ, ಒರೆದರೆ ಬಣ್ಣವಾದರೆ ಕೂಡಲಸಂಗಮದೇವನೊಲಿದು ಸಲಹುವನು. ೩೭೪. ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ! ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ! ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು! ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು! ೩೭೫. ಅಂಜಿದರಾಗದು, ಅಳುಕಿದರಾಗದು! ವಜ್ರಪಂಜರದೊಳಗಿದ್ದರಾಗದು! ತಪ್ಪದೆಲವೋ ಲಲಾಟಲಿಖಿತ! ಕಕ್ಕುಲತೆಬಟ್ಟರಾಗದು ನೋಡಾ! ಧೃತಿಗೆಟ್ಟು ಮನ ಧಾತುಗೆಟ್ಟರೆ ಅಪ್ಪುದು ತಪ್ಪದು ಕೂಡಲಸಂಗಮದೇವ. ೩೭೬. ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ